ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿ,ಬೆಂಗಳೂರು ಗ್ರಾಮಾಂತರ ಜಿಲ್ಲೆ
ಮೈಸೂರಿನ ಪ್ರಾತ್ಯಾಂಡಳಿತ ಜಾರಿಯಲ್ಲಿದ್ದ 1944 ಸಂದರ್ಭದಲ್ಲಿ ಸಾಂಖ್ಯಿಕ ಇಲಾಖೆಯು ಸಂಸ್ಥಾಪಿಸಲ್ಪಟ್ಟಿತ್ತು. ಕಾಲಾನಂತರದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಕಾಯ್ದೆಯನುಸಾರ ಒಂದು ಇಲಾಖೆಯ ರೂಪವನ್ನು ಪಡೆಯಿತು. ಆರಂಭದಿಂದ 1954 ರ ವರೆಗೂ ಸಾಂಖ್ಯಿಕ ಇಲಾಖೆಯ ಆಡಳಿತ, ಕೃಷಿ ಇಲಾಖೆಯ ಅಧೀನದಲ್ಲಿತ್ತು. ಸರ್ಕಾರ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಂಥ ಸಂದರ್ಭದಲ್ಲಿ ಸಾಂಖ್ಯಿಕ ಇಲಾಖೆಯು ಒಂದು ಪ್ರಮುಖ ಸಾಧನವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಇಲಾಖೆಯ ರಚನಾತ್ಮಕ ಕಾರ್ಯಕ್ರಮಗಳ ವಿಸ್ತರಣೆಯನ್ನು ಮನಗಂಡ ಸರ್ಕಾರ, ಸರ್ಕಾರದ ಪ್ರಮುಖ ಅಂಗ ಸಂಸ್ಥೆಯನ್ನಾಗಿ ಗುರುತಿಸಿತು. ಈ ಇಲಾಖೆಯು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಸಾಂಖ್ಯಿಕ ಕಾರ್ಯಗಳು, ಸಾರ್ವಜನಿಕ ಆರೋಗ್ಯ ಮತ್ತು ಆಡಳಿತ ಮುಂತಾದವುಗಳನ್ನು ಪರಿಗಣಿಸಿ 1955 ರಲ್ಲಿ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಗೆ ಪ್ರತ್ಯೇಕ ಇಲಾಖಾ ಸ್ಥಾನಮಾನ ನೀಡಿ ಕೃಷಿ ಇಲಾಖೆಯಿಂದ ಬೇರ್ಪಡಿಸಲಾಯಿತು. ಪ್ರಸ್ತುತ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿಗಳನ್ನು ಸ್ಥಾಪಿಸಲಾಯಿತು
ರಾಜ್ಯ ಸಾಂಖ್ಯಿಕ ವ್ಯವಸ್ಥೆಯ ಭಾಗವಾದ ಜಿಲ್ಲಾ ಸಂಖ್ಯಾ ಸಂಗ್ರಹಣಾ ಕಛೇರಿಯು, ಜಿಲ್ಲಾ ಮಟ್ಟದಲ್ಲಿ ಸಾಂಖ್ಯಿಕ ವ್ಯವಸ್ಥೆಯ ಅಭಿವೃದ್ಧಿ, ನಿಯಂತ್ರಣ ಮತ್ತು ಸರ್ಕಾರದ ಸೇವಾ ಪ್ರಕಾರ್ಯಗಳಲ್ಲಿ ಅತ್ಯವಶ್ಯಕ ಸಾಧನವಾಗುವಂತೆ ಮಾಡುವುದು. ಆ ಮೂಲಕ ಜಿಲ್ಲೆಯ ಒಳಗೂ ಹಾಗೂ ಹೊರಗೂ ಉಪಯೋಗಿಸುವ ಅಂಕಿ ಅಂಶಗಳಲ್ಲಿ ವಿಶ್ವಾಸಾರ್ಹತೆ, ಸಮಗ್ರತೆ/ ಪರಿಪೂರ್ಣತೆಯನ್ನು ಹೆಚ್ಚಿಸುವುದು ಮತ್ತು ನಿಗಧಿತ ಸಮಯದೊಳಗೆ ಒದಗಿಸುವ ಕಾರ್ಯಮಾಡುವುದಾಗಿದೆ.
- ನಾಗರೀಕ ನೋಂದಣಿ: ಜನನ-ಮರಣ ನೋಂದಣಿ ಅಧಿನಿಯಮ-1969 ಕಾಯ್ದೆಯನುಸಾರ ನಾಗರೀಕ ನೋಂದಣಿಯ ಕಾರ್ಯವನ್ನು ಪ್ರತ್ಯೇಕ ತಂತ್ರಾಂಶ ‘ಇ-ಜನ್ಮ’ವನ್ನು ಫೆಬ್ರವರಿ 2015 ರಿಂದ ಜಾರಿಗೊಳಿಸಿ ಸದರಿ ತಂತ್ರಾಂಶದ ಮೂಲಕವೇ ಕಂದಾಯ ಇಲಾಖೆ, ಆರೋಗ್ಯ ಇಲಾಖೆ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಜನನ ಮರಣ ಪ್ರಮಾಣ ಪತ್ರಗಳನ್ನು ಸಾರ್ವಜನಿಕರಿಗೆ ವಿತರಿಸುತ್ತಿವೆ.
- ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯಡಿಯಲ್ಲಿ ಬೆಳೆ ಕಟಾವು ಪ್ರಯೋಗವನ್ನು ಕೈಗೊಳ್ಳುವುದು. ಈ ಯೋಜನೆಯ ಮುಖ್ಯ ಉದ್ದೇಶ ರೈತರಿಗೆ ಪ್ರಕೃತಿ ವಿಕೋಪದಿಂದ ಹಾಗೂ ರೋಗರುಜಿನೆಗಳಿಂದ ಬೆಳೆ ನಷ್ಟಗೊಂಡಾಗ, ನಷ್ಟಗೊಂಡ ರೈತರಿಗೆ ವಿಮೆ ಹಣ ನೀಡುವುದಾಗಿದೆ. ಇದರ ಭಾಗವಾಗಿ ಗ್ರಾಮ ಪಂಚಾಯತಿವಾರು ಮತ್ತು ಹೋಬಳಿವಾರು ಬೆಳೆಗಳನ್ನು ವಿಭಾಗಿಸಿ, ಬೆಳೆ ಕಟಾವು ಪ್ರಯೋಗಗಳನ್ನು ಕೃಷಿ, ಕಂದಾಯ, ಗ್ರಾಮೀಣಾಭಿವೃದ್ಧಿ, ತೋಟಗಾರಿಕಾ ಇಲಾಖೆಗಳಿಂದ ನಿರ್ವಹಿಸಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದೆ.
- ಬೆಳೆಕ್ಷೇತ್ರ ಮರುಹೊಂದಾಣಿಕೆ ವರದಿ: ಗ್ರಾಮ/ಹೋಬಳಿ/ತಾಲ್ಲೂಕು ಮಟ್ಟದಲ್ಲಿ ಬೆಳೆ ಪ್ರದೇಶವನ್ನು ಮರುಹೊಂದಾಣಿಕೆ ಮಾಡುವ ಸಲುವಾಗಿ 2005-06 ರಿಂದ ಬೆಳೆ ಕ್ಷೇತ್ರ ಮರುಹೊಂದಾಣಿಕೆ ಪದ್ದತಿಯು ಜಾರಿಯಲ್ಲಿದೆ. ಈ ಪದ್ಧತಿಯಲ್ಲಿ ಸಂಬಂಧಪಟ್ಟ ಇಲಾಖೆಗಳಾದ ಕಂದಾಯ ಕೃಷಿ, ತೋಟಗಾರಿಕಾ, ಜಲಸಂಪನ್ಮೂಲ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ವರ್ಷದ ಮುಂಗಾರು, ಹಿಂಗಾರು ಮತ್ತು ಬೇಸಿಗೆ ಋತುಗಳ ಬೆಳೆ ಕ್ಷೇತ್ರಗಳ ಮರುಹೊಂದಾಣಿಕೆ ಮಾಡಲಾಗುವುದು.
- ಪ್ರಕಟಣೆಗಳು: ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಒಂದಾಗಿರುವ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯು ಸರ್ಕಾರಕ್ಕೆ, ಸಾರ್ವಜನಿಕರಿಗೆ ಅಗತ್ಯವಾಗಿ ಬೇಕಾಗಿರುವ ವಿವಿಧ ಕ್ಷೇತ್ರಗಳ ಮಾಹಿತಿಯನ್ನು ಒದಗಿಸುವ ಪ್ರಮುಖ ಅಂಗವಾಗಿದೆ. ಜಿಲ್ಲೆಯಲ್ಲಿನ ಆರ್ಥಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಬಗ್ಗೆ ಉಪಯುಕ್ತ ಅಂಕಿ ಅಂಶಗಳನ್ನು ಸಾರ್ವಜನಿಕರ ಉಪಯೋಗಕ್ಕೆ ಅನುಕೂಲವಾಗುವಂತೆ ಜಿಲ್ಲಾ ಅಂಕಿ ಅಂಶಗಳ ನೋಟ ಮತ್ತು ಸಾಮಾಜಿಕ ಮತ್ತು ಆರ್ಥಿಕ ಅವಲೋಕನಗಳನ್ನು ಹಸ್ತ ಪುಸ್ತಕದ ರೂಪದಲ್ಲಿ ಹೊರತರಲಾಗುತ್ತದೆ.