ಜಿಲ್ಲೆಯ-ಬಗ್ಗೆ
ದಿನಾಂಕ 15.08.1986 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಬೆಂಗಳೂರು ಜಿಲ್ಲೆಯಿಂದ ವಿಭಾಗಗೊಂಡಿತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಕರ್ನಾಟಕ ರಾಜ್ಯದ ಪೂರ್ವೊತ್ತರ ಮತ್ತು ಪಶ್ಚಿಮೋತ್ತರ ಆಗ್ನೇಯ ದಿಕ್ಕಿನಲ್ಲಿ ವ್ಯಾಪಿಸಿದೆ. ಈ ಜಿಲ್ಲೆಯು 120 150 ದಿಂದ 130 350 ಅಕ್ಷಾಂಶ ಮತ್ತು 770 050 ದಿಂದ 780 ರೇಖಾಂಶಗಳ ನಡುವೆ ಇರುತ್ತದೆ, ಭೂಮಿಯ ಮೇಲ್ಮೈ ಸಮುದ್ರ ಮಟ್ಟದಿಂದ 629 ರಿಂದ 950 ಮೀಟರ್ ವ್ಯತ್ಯಾಸದ ಎತ್ತರದಲ್ಲಿರುತ್ತದೆ. ಈ ಜಿಲ್ಲೆಗೆ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ನೆಲಮಂಗಲ ತಾಲ್ಲೂಕುಗಳು ಸೇರಿರುತ್ತವೆ. ಈ ಜಿಲ್ಲೆಯ ಉತ್ತರ ದಿಕ್ಕಿನಲ್ಲಿ ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳು, ದಕ್ಷಿಣ ದಿಕ್ಕಿನಲ್ಲಿ ಬೆಂಗಳೂರು ನಗರ, ಪೂರ್ವ ದಿಕ್ಕಿನಲ್ಲಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಹಾಗು ಪಶ್ಚಿಮ ದಿಕ್ಕಿನಲ್ಲಿ ತುಮಕೂರು ಮತ್ತು ರಾಮನಗರ ಜಿಲ್ಲೆಗಳಿವೆ.
ಜಿಲ್ಲೆಯ ಭೂ ವಿಸ್ತಾರವು 2298 ಚ.ಕೀ.ಮೀಗಳಿದ್ದು, ರಾಜ್ಯದ ವಿಸ್ತೀರ್ಣದಲ್ಲಿ ಶೇ 1.19 ರಷ್ಟು ಪ್ರದೇಶವನ್ನು ಹೊಂದಿರುತ್ತದೆ. ಈ ಜಿಲ್ಲೆಯಲ್ಲಿ ಪಿನಾಕಿನಿ, ಅರ್ಕಾವತಿ ನದಿಗಳು ಹರಿಯುತ್ತವೆ. ರೇಷ್ಮೆ, ಹಾಲು, ಹೂವು, ತರಕಾರಿ ಮತ್ತು ಕೈಮಗ್ಗದ ಚಟುವಟಿಕೆಗಳಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಪ್ರಸಿದ್ಧವಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅನೇಕ ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳಿದ್ದು, ಅವುಗಳಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಮಣ್ಯಸ್ವಾಮಿ ದೇವಸ್ಥಾನ, ನೆಲಮಂಗಲ ತಾಲ್ಲೂಕಿನ ಶಿವಗಂಗೆ ಬೆಟ್ಟ ಮತ್ತು ವಿಜಯ ವಿಠ್ಠಲ ದೇವಸ್ಥಾನ, ದೇವನಹಳ್ಳಿ ತಾಲ್ಲೂಕಿನಲ್ಲಿ ಅತ್ಯಾಧುನಿಕ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇರುತ್ತದೆ. ಇದು ಬೆಂಗಳೂರಿನಿಂದ ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ–7 ರಲ್ಲಿ 35 ಕಿ.ಮೀ. ಅಂತರದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದೆ. ದೇವನಹಳ್ಳಿಯು ಟಿಪ್ಪುವಿನ ಜನ್ಮ ಸ್ಥಳವಾಗಿದ್ದು, ಈ ಹಿಂದೆ ಇದನ್ನು ದೇವನದೊಡ್ಡಿ ಎಂಬುದಾಗಿ ಕರೆಯಲಾಗುತ್ತಿತ್ತು ಕ್ರಿ.ಶ. 1501 ರಲ್ಲಿ ಆಗಿನ ಪಾಳೇಗಾರರಾದ ಶ್ರೀಯುತ ಮಲ್ಲಬೈರೇಗೌಡ ಎಂಬುವರು ಇದನ್ನು ದೇವನಹಳ್ಳಿ ಎಂದು ಪುನರ್ ನಾಮಕರಣ ಮಾಡಿರುವ ಬಗ್ಗೆ ಇತಿಹಾಸದಲ್ಲಿ ತಿಳಿಸಲಾಗಿದೆ.
ಈ ಊರು ಹೊಯ್ಸಳರ ಆಳ್ವಿಕೆಯಲ್ಲೂ ಪ್ರಖ್ಯಾತವಾಗಿತ್ತು. ಶ್ರೀ ವೇಣುಗೋಪಾಲಸ್ವಾಮಿ ದೇವಾಲಯ ಇಲ್ಲಿ ಪ್ರಸಿದ್ದಿ ಪಡೆದಿದೆ ಮತ್ತು ನಂದಿ ಗಿರಿಧಾಮಕ್ಕೆ ಹೊಂದಿಕೊಂಡಿದೆ.