Close

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ

ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಸಂಕ್ಷಿಪ್ತ ವಿವರ

ಉದ್ಯೋಗಿನಿ ಯೋಜನೆ:

ಈ ಯೋಜನೆಯು 1997-98ನೇ ಸಾಲಿನಿಂದ ಜಾರಿಗೆ ಬಂದಿರುತ್ತದೆ. ಉದ್ಯೋಗಿನಿ ಯೋಜನೆಯಡಿಯಲ್ಲಿ ಅರ್ಹ ಮಹಿಳಾ ಉದ್ಯಮಿಗಳಿಗೆ ಉದ್ಯಮ ಸ್ಥಾಪಿಸಲು ಮತ್ತು ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ಗರಿಷ್ಠ ರೂ.1,00,000/-ಗಳವರೆಗೆ ಬ್ಯಾಂಕ್ ಗಳ ಮೂಲಕ ಸಾಲ ನೀಡುವ ಕಾರ್ಯಕ್ರಮ ರೂಪಿಸಿದೆ. ಹಣಕಾಸು ಸಂಸ್ಥೆಗಳು ಅಥವಾ ಬ್ಯಾಂಕ್ ಗಳು ಮಂಜೂರು ಮಾಡುವ ಸಾಲದ ಮೊತ್ತಕ್ಕೆ ನಿಗಮದಿಂದ ಸಹಾಯಧನ ಮಂಜೂರು ಮಾಡಲು ಅವಕಾಶವಿದೆ. ಬ್ಯಾಂಕುಗಳಿಂದ ಮಂಜೂರಾತಿ ನೀಡಿದ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ.20 ರಷ್ಟು ಅಥವಾ ಗರಿಷ್ಠ ರೂ.7500/-ಕ್ಕೆ ಮೀರದಂತೆ ಮತ್ತು ವಿಶೇಷ ವರ್ಗದವರಿಗೆ (ಅಂಗವಿಕಲರು/ವಿಧವೆ/ಸಂಕಷ್ಟಕ್ಕೋಳಗಾದ ಮಹಿಳೆಯರಿಗೆ) ಶೇ.30ರಷ್ಟು ಅಥವಾ ಗರಿಷ್ಠ ರೂ.10,000/-ದಂತೆ ಹಾಗೂ (ಪ.ಜಾತಿ/ಪ.ಪಂ)ದವರಿಗೆ ಶೇ. 50ರಷ್ಟು ಅಥವಾ ಗರಿಷ್ಠ ರೂ. 50,000/-ಗಳು (2016-17ನೇ ಸಾಲಿನಿಂದ ಮಾತ್ರ ಅನುದಾನ ಲಭ್ಯತೆಯ ಮೇರೆಗೆ) ಸಹಾಯಧನ ಮಂಜೂರು ಮಾಡಬಹುದಾಗಿದೆ. ಸಂಬಂಧಪಟ್ಟಂತಹ ಅರ್ಜಿ ನಮೂನೆಗಳು ಆಯಾ ತಾಲ್ಲೂಕಿನ “ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ” ಲಭ್ಯವಿರುತ್ತದೆ.

ಕಿರುಸಾಲ ಯೋಜನೆ :

ಈ ಯೋಜನೆಯು 2011-12ನೇ ಸಾಲಿನಿಂದ ಜಾರಿಗೆ ಬಂದಿರುತ್ತದೆ, ಸದರಿ ಯೋಜನೆಯಡಿ 2016-17ನೇ ಸಾಲಿನಲ್ಲಿ ಪ್ರತಿಗುಂಪಿಗೆ ಬಡ್ಡಿ ರಹಿತ ರೂ. 2 ಲಕ್ಷ ಸಾಲ ಮಂಜೂರಾತಿ ನೀಡಲಾಗುತ್ತಿದೆ. ಸದರಿ ಸಾಲ ಪಡೆದ ಸ್ತ್ರೀಶಕ್ತಿ ಸಂಘಗಳು 20 ತಿಂಗಳ ಸಮಾನ ಕಂತುಗಳಲ್ಲಿ ನಿಗಮಕ್ಕೆ ಹಿಂದಿರುಗಿಸಬೇಕಿರುತ್ತದೆ. ನಿಗದಿ ಪಡಿಸಿದ ಸಮಯಕ್ಕೆ ಸಾಲ ಮರುಪಾವತಿಸದೇ ಇದ್ದಲ್ಲಿ ಮಾತ್ರ ಶೇ. 1ರಷ್ಟು ಬಡ್ಡ ವಿಧಿಸಲಾಗುತ್ತದೆ. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಸಮಾಜದಲ್ಲಿ ಸ್ತ್ರೀಶಕ್ತಿ ಗುಂಪುಗಳು ಆರ್ಥಿಕ ಚಟುವಟಿಕೆಗಳ ಘಟಕ/ಸಣ್ಣ ಉದ್ದಿಮೆಯನ್ನು ಸ್ಥಾಪಿಸಿ, ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಲು ಅವಕಾಶ ಕಲ್ಪಿಸಲಾಗಿದೆ.

ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ :

ಈ ಯೋಜನೆಯು 2011-12ನೇ ಸಾಲಿನಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಾರಿಗೆ ಬಂದಿರುತ್ತದೆ. ಮಹಿಳಾ ಉಧ್ಯಮಿಗಳನ್ನು ಮತ್ತು ಸಮರ್ಥ ಗ್ರಾಹಕರನ್ನು ಒಂದುಗೂಡಿಸಿ, ಮಹಿಳಾ ಉದ್ದಿಮೆದಾರರು ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟಗಳಲ್ಲಿ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ನಡೆಸಲಾಗುತ್ತದೆ.

ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ:

ಈ ಯೋಜನೆಯು 2013-14ನೇ ಸಾಲಿನಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಾರಿಯಲ್ಲಿರುತ್ತದೆ. ಈ ಯೋಜನೆಯಡಿಯಲ್ಲಿ ಲಿಂಗತ್ವ ಅಲ್ಪಸಂಕ್ಯಾತರು ಸ್ವಯಂ ಉದ್ಯೋಗಕ್ಕಾಗಿ ಕೌಶಲ್ಯ ತರಬೇತಿ ನೀಡಿ ಇವರು ಗೌರವಾನ್ವಿತ ಜೀವನವನ್ನು ನಡೆಸಲು ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮದಿಂದ ಅಭ್ಯರ್ಥಿಗಳು ಪಡೆಯುವ ತರಬೇತಿಗನುಗುಣವಾಗಿ ವೈಯಕ್ತಿಕವಾಗಿ ರೂ. 20,000/-ಗಳ ಪ್ರೋತ್ಸಾಹಧನವನ್ನು ವಿತರಿಸಲಾಗುವುದು. 2017-18ನೇ ಸಾಲಿನಿಂದ ವೈಯಕ್ತಿಕವಾಗಿ ರೂ. 25,000/-ಗಳ ಸಾಲ ಮತ್ತು ರೂ.25,000/-ಗಳ ಪ್ರೋತ್ಸಾಹಧನವನ್ನು ವಿತರಿಸಲಾಗುವುದು. ಸಾಲದ ಮೊತ್ತ ರೂ. 25,000/-ಗಳನ್ನು ಫಲಾನುಭವಿಗಳು 25 ಕಂತುಗಳಲ್ಲಿ ನಿಗಮಕ್ಕೆ ಮರುಪಾವತಿಸಬೇಕಿರುತ್ತದೆ.

ಚೇತನ ಯೋಜನೆ:

ಈ ಯೋಜನೆಯು 2014-15ನೇ ಸಾಲಿನಿಂದ ಜಾರಿಗೆ ಬಂದಿರುತ್ತದೆ, ಈ ಯೋಜನೆಯಡಿ ಲೈಂಗಿಕ ಕಾರ್ಯಕರ್ತೆಯರು ಅಥವಾ ಲೈಂಗಿಕ ಶೋಷಣೆಗೆ ಒಳಗಾದ ಮಹಿಳೆಯರು ತಮ್ಮ ವೃತ್ತಿ ಜೀವನದಿಂದ ಹೊರಬಂದು ಸ್ವಾವಲಂಬಿಗಳಾಗಿ ಇಚ್ಚಿಸುವಂತಹವರಿಗೆ ಪುನರ್ವಸತಿ ಕಲ್ಪಿಸುವ ದೃಷ್ಠಿಯಿಂದ ಆದಾಯ ಉತ್ಪನ್ನಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆರ್ಥಿಕ ಸ್ವಾವಲಂಬನೆ ಮೂಲಕ ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಗೊಳ್ಳಲು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಆಯ್ಕೆ ಆಗುವ ಪ್ರತಿ ಅಭ್ಯರ್ಥಿಗೆ ಇಡಿಪಿ ತರಬೇತಿ ನೀಡಿ ರೂ. 20,000/- ಗಳ ಸಹಾಯಧನವನ್ನು ವಿತರಿಸಲಾಗುವುದು. 2017-18ನೇ ಸಾಲಿನಿಂದ ವೈಯಕ್ತಿಕವಾಗಿ ರೂ. 25,000/-ಗಳ ಸಾಲ ಮತ್ತು ರೂ.25,000/-ಗಳ ಪ್ರೋತ್ಸಾಹಧನವನ್ನು ವಿತರಿಸಲಾಗುವುದು. ಸಾಲದ ಮೊತ್ತ ರೂ. 25,000/-ಗಳನ್ನು ಫಲಾನುಭವಿಗಳು 25 ಕಂತುಗಳಲ್ಲಿ ನಿಗಮಕ್ಕೆ ಮರುಪಾವತಿಸಬೇಕಿರುತ್ತದೆ.

ಕೆಎಸ್ಎಫ್ ಸಿ ಮುಖಾಂತರ ಸಾಲ ಸೌಲಭ್ಯ ಯೋಜನೆ:

ಈ ಯೋಜನೆಯು 2015-16ನೇ ಸಾಲಿನಿಂದ ಜಾರಿಗೊಂಡಿರುತ್ತದೆ. ಈ ಯೋಜನೆಯಡಿ ಮಹಿಳೆಯರು 5-50 ಲಕ್ಷಗಳ ವರೆಗೆ ಸಾಲವನ್ನು ಕೆ ಎಸ್ ಎಫ್ ಸಿ ಮುಖಾಂತರ ಪಡೆಯಬಹುದಾಗಿದೆ. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಕೆ ಎಸ್ ಎಫ್ ಸಿ ವಿಧಿಸುವ ಬಡ್ಡಿಯಲ್ಲಿ ಶೇಕಡ 10ರಷ್ಟು ಬಡ್ಡಿಯನ್ನು ಪ್ರತಿ ತಿಂಗಳು ನಿಭಂದನೆಗಳನುಸಾರ ಫಲಾನುಭವಿಯ ಸಾಲದ ಖಾತೆಗೆ ಜಮಾ ಮಾಡಲಾಗುವುದು, ಈ ಅವಧಿಯು 5 ವರ್ಷಗಳವರೆಗಿರುತ್ತದೆ

ಮಹಿಳಾ ತರಬೇತಿ ಯೋಜನೆ:

ಮಹಿಳಾ ತರಬೇತಿ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ, ವಿಧವೆಯರಿಗೆ, ನಿರ್ಗತಿಕ ಮತ್ತು ವಿಕಲಚೇತನರಿಗೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡಿ ಅವರಲ್ಲಿ ಉದ್ಯಮಶೀಲತೆಯನ್ನು ಬೆಳೆಸುವುದು ಹಾಗೂ ಚಿಕ್ಕ ಉದ್ಯಮಿಗಳನ್ನು ಸ್ಥಾಪಿಸಲು ಇಚ್ಛೆಯುಳ್ಳ ಮಹಿಳೆಯರಿಗೆ ಯೋಜನಾ ವರದಿ ತಯಾರಿಕೆ. ಸಾಮಾನ್ಯ ಲೆಕ್ಕ ಪತ್ರ ನಿರ್ವಹಣೆ, ಕಚ್ಚಾ ಸಾಮಾಗ್ರಿಗಳ ನಿರ್ವಹಣೆ, ಮಾರುಕಟ್ಟೆ, ಬ್ಯೂಟಿ ಕಲ್ಚರ್, ಫ್ಯಾಶನ್ ಡಿಸೈನಿಂಗ್, ಗಾರ್ಮೆಂಟ್ಸ್, ಪ್ರಿಂಟಿಂಗ್, ಮೀಡಿಯಾ, ವೀಡಿಯೋಗ್ರಾಫಿ, ಹಾಸ್ಪಿಟಾಲಿಟಿ, ಆಹಾರ ಸಂಸ್ಕರಣೆ, ಬ್ಯಾಗ್ ತಯಾರಿಕೆ, ಕಸೂತಿ, ಪೇಪರ್ ಪ್ರೋಡಕ್ಟ್ಸ್ ಇನ್ನಿತರ ವಿಷಯಗಳ ಬಗ್ಗೆ ತರಬೇತಿಯನ್ನು ನೀಡಲಾಗುವುದು. ವಿಕಲಚೇತನ ಹಾಗೂ ಅಸಹಾಯಕ ಮಹಿಳೆಯರಿಗೆ ಆಧ್ಯತೆ ನೀಡಲಾಗುವುದು ಹಾಗೂ ಆದಾಯದ ಮಿತಿ ಇರುವುದಿಲ್ಲ. ತರಬೇತಿಯನ್ನು ರೂಡ್ ಸೆಟ್ ಸಂಸ್ಥೆ, ಬ್ಯಾಂಕ್ ಪ್ರಾಯೋಜಿತ ತರಬೇತಿ ಸಂಸ್ಥೆ, ಸರ್ಕಾರಿ ತರಬೇತಿ ಸಂಸ್ಥೆಗಳು, ಕರ್ನಾಟಕ ವೃತ್ತಿ ತರಬೇತಿ ಹಾಗೂ ಅಭಿವೃದ್ಧಿ ನಿಗಮ ಮತ್ತು ಸ್ತ್ರೀಶಕ್ತಿ ಒಕ್ಕೂಟಗಳ ಮೂಲಕ ನಡೆಸಲಾಗುತ್ತದೆ

ಸಮೃದ್ಧಿ ಯೋಜನೆ:

ಈ ಯೋಜನೆಯು 2016-17ನೇ ಸಾಲಿನಿಂದ ಜಾರಿಗೆ ಬಂದಿರುತ್ತದೆ, ಈ ಯೋಜನೆಯಡಿ ಬೀದಿಬದಿಯಲ್ಲಿ ಸಣ್ಣ ವ್ಯಾಪಾರ ನಡೆಸುತ್ತಿರುವ ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ ಸಮೃದ್ಧಿ ಎಂಬ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ನಗರ ಮತ್ತು ಗ್ರಾಮೀಣ ಪ್ರದೇಶದ ಬೀದಿಬದಿ ಮಹಿಳಾ ವ್ಯಾಪಾರಿಗಳು ಹೆಚ್ಚಿನ ಬಡ್ಡಿ ನೀಡಿ ಸಾಲ ಪಡೆಯುವುದನ್ನು ತಡೆಗಟ್ಟಿ ಶೋಷಣೆಯಿಂದ ಮುಕ್ತಗೊಳಿಸುವುದು. ಮಹಿಳೆಯರ ನಿರುದ್ಯೋಗ ಸಮಸ್ಯೆಯನ್ನು ನಿವಾರಣೆ ಮಾಡುವುದು ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಆಯ್ಕೆ ಆಗುವ ಪ್ರತಿ ಮಹಿಳಾ ಅಭ್ಯರ್ಥಿಗೆ ರೂ. 10,000/- ಗಳ ಸಹಾಯಧನವನ್ನು ನಿಯಮಾನುಸಾರ ವಿತರಿಸಲಾಗುವುದು.

ಧನಶ್ರೀ ಯೋಜನೆ:

ಈ ಯೋಜನೆಯು 2016-17ನೇ ಸಾಲಿನಿಂದ ಜಾರಿಗೆ ಬಂದಿರುತ್ತದೆ. ಈ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ ವಾಸಿಸುತ್ತಿರುವ 18-60 ವಯೋಮಿತಿಯ ಹೆಚ್.ಐ.ವಿ ಸೋಂಕಿತ ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಂಡು ಅಭಿವೃದ್ಧಿ ಹೊಂದಲು ಪ್ರೇರೇಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಪ್ರತಿ ಫಲಾನುಭವಿಗೆ ರೂ. 40,000/-ಗಳ ನೇರ ಸಾಲ ಹಾಗೂ ರೂ.10,000/-ಗಳ ಸಹಾಯಧನ ಒಟ್ಟು ರೂ. 50,000/-ಗಳ ಅನುದಾನವನ್ನು ಈ ಯೋಜನೆಯಡಿ ನೀಡಲಾಗುವುದು. ಸಾಲದ ಮೊತ್ತ ರೂ. 40,000/-ಗಳನ್ನು ಫಲಾನುಭವಿಗಳು 36 ಕಂತುಗಳಲ್ಲಿ ಶೇಕಡ 4ರ ಬಡ್ಡಿಯೊಂದಿಗೆ ನಿಗಮಕ್ಕೆ ಮರುಪಾವತಿಸಬೇಕಿರುತ್ತದೆ. 2017-18ನೇ ಸಾಲಿನಿಂದ ವೈಯಕ್ತಿಕವಾಗಿ ರೂ. 25,000/-ಗಳ ಸಾಲ ಮತ್ತು ರೂ.25,000/-ಗಳ ಪ್ರೋತ್ಸಾಹಧನವನ್ನು ವಿತರಿಸಲಾಗುವುದು. ಸಾಲದ ಮೊತ್ತ ರೂ. 25,000/-ಗಳನ್ನು ಫಲಾನುಭವಿಗಳು 25 ಕಂತುಗಳಲ್ಲಿ ನಿಗಮಕ್ಕೆ ಮರುಪಾವತಿಸಬೇಕಿರುತ್ತದೆ.

ರಾಜ್ಯ ಸಂಪನ್ಮೂಲ ಕೇಂದ್ರ ಯೋಜನೆ:

ಸರ್ಕಾರದ ವಿವಿಧ ಸೌಲಭ್ಯಗಳ ಹಾಗೂ ಸ್ವ-ಉದ್ಯೋಗಗಳ ಬಗ್ಗೆ ಮಾಹಿತಿ ನೀಡುವುದು. ಇಲಾಖಾ ಅಧಿಕಾರಿಗಳಿಗೆ ಕಾಲೇಜು ವಿದ್ಯಾರ್ಥಿನಿಯರಿಗೆ ಮತ್ತು ಜನ ಪ್ರತಿನಿಧಿಗಳಿಗೆ ಲಿಂಗ ತಾರತಮ್ಯದ ಬಗ್ಗೆ ಕಾರ್ಯಗಾರ ಮತ್ತು ಸ್ತ್ರೀ ಸಮಾನತೆಯ ಕುರಿತು ಅರಿವು ಮೂಡಿಸಲಾಗುವುದು.