ಹುಲುಕುಡಿ ಬೆಟ್ಟ
ನಿರ್ದೇಶನಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಹುಲುಕುಡಿ ಬೆಟ್ಟ ಪ್ರಾಕೃತಿಕ ಸೌಂದರ್ಯ ಹೊಂದಿರುವ ಸುಂದರ ತಾಣ. ದೊಡ್ಡಬಳ್ಳಾಪುರ ತಾಲ್ಲೂಕು ಸ್ಥಳದಿಂದ ಸುಮಾರು 14 ಕಿ.ಮೀ ಹಾಗೂ ಬೆಂಗಳೂರಿನಿಂದ 55 ಕಿ.ಮೀ. ದೂರದಲ್ಲಿದೆ. ಹುಲುಕಡಿ ಬೆಟ್ಟಕ್ಕೆ ದೊಡ್ಡಬಳ್ಳಾಪುರ-ತುಮಕೂರು ರಸ್ತೆ ದೊಡ್ಡಬೆಳವಂಗಲದಿಂದ ಹೋಗಲು ಉತ್ತಮವಾದ ರಸ್ತೆ ಸೌಲಭ್ಯ ಇದೆ. ವಿಜಯನಗರ ಅರಸರ ಕಾಲಾವಧಿಯಲ್ಲಿ ಹುಲುಕುಡಿ ಪ್ರಭುಗಳ ಆಡಳಿತಕ್ಕೆ ಒಳಪಟ್ಟಿತ್ತು. ಬೆಟ್ಟದ ಮೇಲೆ ಗಂಗರ-ಹೊಯ್ಸಳರ ಕಾಲಾವಧಿ ಶಾಸನಗಳು ಇವೆ. ಚೋಳರ ಕಾಲದಲ್ಲಿ ನಿರ್ಮಿಸಲಾಗಿರುವ ಸುಂದರವಾದ ವೀರಭದ್ರಸ್ವಾಮಿ ವಿಗ್ರಹವನ್ನು ಬೆಟ್ಟದ ಮೇಲಿನ ಕಲ್ಲಿನ ಗುಹಾ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ.
ಹುಲುಕುಡಿ ಬೆಟ್ಟದ ಸುತ್ತು ಒಟ್ಟು ಹನ್ನೊಂದು ದೇವಾಲಯಗಳಿವೆ. ಸುಮಾರು 8 ಕಿ.ಮೀ. ಸುತ್ತಳತೆ ಇರುವ ಈ ಬೆಟ್ಟವನ್ನು ಪ್ರದಕ್ಷಿಣೆ ಹಾಕಿದರೆ ಕೈಲಾಸ ಪರ್ವತವನ್ನೇ ಸುತ್ತಿದಂತ ಎನ್ನುವ ನಂಬಿಕೆ ಭಕ್ತರಲ್ಲಿದೆ.ಬೆಟ್ಟದ ಮೇಲಿನ ವೀರಭದ್ರಸ್ವಾಮಿಗೆ ಸೋಮವಾರ, ಶುಕ್ರವಾರ ಮತ್ತು ಭಾನುವಾರ ವಿಶೇಷ ಪೂಜೆ ನಡೆಯಲಿದೆ.ಬೆಟ್ಟಕ್ಕೆ ಹತ್ತಲು ಮೆಟ್ಟಿಲುಗಳು ನಿರ್ಮಿಸಲಾಗಿದೆ.ಮೆಟ್ಟಿಲುಗಳನ್ನು ಹತ್ತುವಾಗ ಬಿಸಿಲಿಗೆ ತಡೆಯಾಗಿ ನೆರಳಿನ ವ್ಯವಸ್ಥೆ ಮಾಡಲಾಗಿದೆ.ಬೆಟ್ಟದ ತುದಿಯಲ್ಲಿ ಕಲ್ಯಾಣಿ ಇರುತ್ತದೆ.
ಬೆಟ್ಟದ ತಪ್ಪಲಿನಲ್ಲಿ ಹುಲುಕುಡಿ ವೀರಭದ್ರಸ್ವಾಮಿ ಟ್ರಸ್ಟ್ ವತಿಯಿಂದ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಸೋಮವಾರ, ಶುಕ್ರವಾರ ಮತ್ತು ಭಾನುವಾರ ಅನ್ನದಾಸೋಹ ನಡೆಯುತ್ತದೆ. ಪ್ರತಿವರ್ಷ ಫೆಬ್ರುವರಿ ತಿಂಗಳ ರಥಸಪ್ತಮಿ ದಿನದಂದು ರಥೋತ್ಸವ ನಡೆಯುತ್ತದೆ.
- ಪ್ರವಾಸಿಗರ ಅಂಕಿ ಸಂಖ್ಯೆ: ಪ್ರಾಕೃತಿಕ ಪ್ರವಾಸಿ ತಾಣವಾಗಿದ್ದು ತಿಂಗಳಿಗೆ ಅಂದಾಜು 500 ರಿಂದ 1000 ದೇಶಿಯ ಪ್ರವಾಸಿಗರು ಬೇಟಿ ನೀಡುತ್ತಾರೆ.
- ಪ್ರಸ್ತುತ ಬೆಟ್ಟದ ಬುಡದಲ್ಲಿ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ, ಬೆಟ್ಟಕ್ಕೆ ಮೆಟ್ಟಿಲುಗಳು, ಯಾವುದೇ ಮೂಲಭೂತ ಸೌಲಭ್ಯ ಇರುವುದಿಲ್ಲ.
ತಲುಪುವ ಬಗೆ:
ವಿಮಾನದಲ್ಲಿ
ಅಂತರಾಷ್ಟ್ರೀಯ ವಿಮಾನನಿಲ್ದಾಣ(ದೇವನಹಳ್ಳಿ)
ರೈಲಿನಿಂದ
ದೊಡ್ಡಬಳ್ಳಾಪುರ
ರಸ್ತೆ ಮೂಲಕ
ದೊಡ್ಡಬಳ್ಳಾಪುರ